The Mysore Association The Mysore Association Mumbai · A cultural home for Kannadigas since 1926
Gallery

Mysore Association Golden Jubilee Endowment Lecture Series - 2019

March 7, 2019

ಮೈಸೂರು ಅಸೋಸಿಯೇಷನ್ ಮುಂಬೈ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಜೊತೆಗೂಡಿ ನಡೆಸಿದ ಎರ‍ಡು ದಿನಗಳ ’ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಮಾಲಿಕೆ -೨೦೧೯" ರಲ್ಲಿ ಖ್ಯಾತ ಸಾಹಿತಿ, ಸಿನಿಮಾ ನಿರ್ದೇಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು ’ನಾನು ಮತ್ತು ನನ್ನ ಸಮಕಾಲೀನರು ಮತ್ತು ನನ್ನ ಸಾಹಿತ್ಯ’ ಹಾಗೂ ’ನಾನು ಮತ್ತು ನನ್ನ ಸಿನಿಮಾ’ ಎಂಬ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.  

ನಾವು ಓದಿಗೆ ಮರಳಬೇಕು -ಡಾ. ನಾಗತಿಹಳ್ಳಿ ಚಂದ್ರಶೇಖರ್
ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಷನ್ ಮುಂಬೈ ಇವುಗಳ ಸಹಯೋಗದಲ್ಲಿ ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರಗಿತು. ದತ್ತಿ ಉಪನ್ಯಾಸ ನೀಡಲು ಆಗಮಿಸಿದ ಖ್ಯಾತ ಸಾಹಿತಿ ಮತ್ತು ಇತರ ಅತಿಥಿಗಳನ್ನು ಮುಂಬಯಿ ವಿವಿ ಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಸ್ವಾಗತಿಸಿದರು.  ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮ ಶೆಟ್ಟಿಯವರು ಡಾ. ಚಂದ್ರಶೇಖರ್ ಅವರನ್ನು ಪರಿಚಯಿಸಿದರು.
“ನಾನು, ನನ್ನ ಸಮಕಾಲೀನರು ಮತ್ತು ನನ್ನ ಸಾಹಿತ್ಯ” ವಿಷಯದ ಬಗೆಗೆ ಡಾ. ನಾಗತಿಹಳ್ಳಿ ಚಂದ್ರಶೇಖರ್ ಉಪನ್ಯಾಸ ಮಾಡಿದರು. ಬದಲಾಗುತ್ತಿರುವ ಸಾಹಿತ್ಯಿಕ ಆಸಕ್ತಿ, ಕುಂದುತ್ತಿರುವ ಓದುವ ಆಸಕ್ತಿಯ ಸಾಹಿತ್ಯ ಮಾಧ್ಯಮವಾದ ಸಣ್ಣ ಕತೆಗಳು ಕಥಾಗಾರನಿಗೆ ನೀಡುವ ಅವಕಾಶ - ಸ್ವಾತಂತ್ರ್ಯಗಳನ್ನು ವಿವರಿಸಿದರು. 1977 ರಿಂದ ಗಂಭೀರವಾಗಿ ಕತೆ ಬರೆಯಲು ತೊಡಗಿದ ಡಾ. ಚಂದ್ರಶೇಖರ್ ತಮ್ಮ ಕಥಾಗಾರಿಕೆ ನಡೆದು ಬಂದ ದಾರಿಯನ್ನು ತಿಳಿಸಿದರು. ಸಾಹಿತ್ಯವು ನಾಡಿನ ನೆಲದಲ್ಲಿ ಕಾಲೂರಿರ ಬೇಕೆಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಅಗಾಧವಾದ ಶಕ್ತಿ ಮತ್ತು ಶಾಶ್ವತೆಯನ್ನು ಹೊಂದಿದ ಸಾಹಿತ್ಯದ ಓದಿಗೆ ನಾವು ಮರಳಬೇಕೆಂದು ಕರೆಕೊಟ್ಟರು.
ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂಟು ಚಿನ್ನದ ಪದಕಗಳನ್ನು ಪಡೆದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅಂದಿನ ಗುರುಗಳಾದ ಡಾ. ಹಾ.ಮಾ. ನಾಯಕ, ಶ್ರೀ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಮುಂತಾದ ವಿದ್ವಾಂಸರಾದ ಗುರುಗಳನ್ನು ನೆನೆದುಕೊಂಡರು. ಹಾಗೆಯೇ ಸಮಕಾಲೀನ ಕತೆಗಾರರಾದ ಜಯಂತ ಕಾಯ್ಕಿಣಿ, ರವಿ ಬೆಳಗೆರೆ, ಲಂಕೇಶ್ ಮುಂತಾದವರನ್ನೂ ಸ್ಮರಿಸಿದರು.
ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಯಾವುದೇ ವಿಶಿಷ್ಟ ಪಂಥಕ್ಕೂ ಸೇರದೆ ತಮ್ಮದೇ ಜಾಡು ಹಿಡಿದು ಕಥೆ ಕಟ್ಟಿದವರು. ನನ್ನ ಕತೆಗಳು ನನ್ನ ವ್ಯಕ್ತಿತ್ವ ಎಂದು ನಂಬಿ ಸಾಹಿತ್ಯ ರಚನೆ ಮಾಡಿದವರು. ಅವರು ಬದುಕನ್ನು ವಿಭಿನ್ನ ರೀತಿಯಲ್ಲಿ ಕಂಡು ತಮ್ಮ ಕಥೆಗಳಲ್ಲಿ ಅಭಿವ್ಯಕ್ತಿಗೊಳಿಸಿದರು.
    ಇದೇ ಸಂದರ್ಭದಲ್ಲಿ ಡಾ. ಲೀಲಾ ಬಿ. ಜೋಹಿಸ್ ಅವರು ಸಂಪಾದಿಸಿದ “ಪತ್ರಿಕೋದ್ಯಮದ ಮೇರು ಪ್ರತಿಭೆ ಆರ್. ವಿ. ಮೂರ್ತಿ” ಕೃತಿಯನ್ನು ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು. ಮುಂಬಯಿಯ ಖ್ಯಾತ ನಾಟಕಕಾರ ಡಾ. ಬಿ.ಆರ್. ಮಂಜುನಾಥ್ ಕೃತಿಯನ್ನು ಪರಿಚಯಿಸುತ್ತಾ ಪತ್ರಕರ್ತ ಆರ್. ವಿ. ಮೂರ್ತಿಯವರ ಕನ್ನಡಪರ ಕಾಳಜಿ, ಸಮಾಜ ಸೇವಾ ಮನೋಭಾವ ಮತ್ತು ಪತ್ರಕರ್ತನ ವೃತ್ತಿಪರತೆಯನ್ನು ಶ್ಲಾಘಿಸಿದರು.
    ಈ ಸಾಹಿತ್ಯಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ – ಕಲಾವಿದ ಶ್ರೀ ಜಯ ಸಾಲ್ಯಾನ್ ಅವರ ಚಿತ್ರಕಲಾ ಪ್ರದರ್ಶವನ್ನು ಹಿರಿಯ ಚಿತ್ರ ಕಲಾವಿದರಾದ ಶ್ರೀ ದೇವದಾಸ ಶೆಟ್ಟಿ ಅವರು ಉದ್ಘಾಟಿಸಿದರು. ಚಿತ್ರ ಕಲಾ ಪ್ರದರ್ಶನದ ಬಗ್ಗೆ ಮಾತನಾಡಿದ ಎಂ. ಮಂಜುನಾಥಯ್ಯನವರು “ಕಲಾವಿದ ಜಗತ್ತನ್ನು ನೋಡುವ ದೃಷ್ಟಿಯಂತೆ ಕಲಾಕೃತಿ ಮೂಡಿ ಬರುತ್ತದೆ” ಎನ್ನುತ್ತಾ ಯುವ ಕಲಾವಿದ ಶ್ರೀ ಸಾಲ್ಯಾನರಿಗೆ ಶುಭಹಾರೈಸಿದರು.
    ಆರಂಭದಲ್ಲಿ ಡಾ. ಶ್ಯಾಮಲಾ ಪ್ರಕಾಶ್ ಪ್ರಾರ್ಥನೆ ಹಾಡಿ ಕೊನೆಯಲ್ಲಿ ಮೈಸೂರು ಅಸೋಸಿಯೇಷನ್‍ನ ಗೌರವ ಕಾರ್ಯದರ್ಶಿ ಡಾ. ಜಿ. ಎಸ್. ಶಂಕರಲಿಂಗ ಅವರು ವಂದನಾರ್ಪಣೆ ಮಾಡಿದರು.
    
ಸಿನಿಮಾ ಜನಸಾಮಾನ್ಯರಿಗೆ ಅರ್ಥವಾಗುವಂತಿರಬೇಕು-ನಾಗತಿಹಳ್ಳಿ
ಮುಂಬಯಿ:- ಸಿನಿಮಾದಲ್ಲಿ ಮುಖ್ಯವಾಗಿ 3 ಪ್ರಕಾರಗಳಿವೆ. ಒಂದು ಆರ್ಟ್ ಪಿಲ್ಮ್, ಕಲೆಗಾಗಿ ಕಲೆ ಎನ್ನುವ ಉದ್ದೇಶದಿಂದ ರಚಿತವಾಗುವಂತದ್ದು. ಇನ್ನೊಂದು ಕಮರ್ಶಿಯಲ್ ಮಾದರಿಯದ್ದು. ನನ್ನದು ಇವೆರಡರ ನಡುವಿನ ದಾರಿ. ಮಧ್ಯಮವರ್ಗದ ಸಿನೆಮಾವನ್ನು ಆರಿಸಿಕೊಂಡವನು ನಾನು. ಸಿನೆಮಾ ಅನ್ನುವುಉದು ಭಯಂಕರವಾದ ಜೂಜು. ಈ ಜೂಜಿನ ಆತಂಕದಲ್ಲಿ ನಾವು ಕೆಟ್ಟ ಸಿನೆಮಾವನ್ನು ಸೃಷ್ಠಿಸಬಾರದು. ಸಿನೆಮಾ ನಿರ್ದೇಶಕನಿಗೆ ಆರ್ಥಿಕ ಹೊಣೆಗಾರಿಕೆ ಇರುತ್ತದೆ. ಅಲ್ಲಿ ನಿರ್ದೇಶಕನೇ ನಿಜವಾದ ನಾಯಕ. ಎಲ್ಲವನ್ನೂ ನಿರ್ವಹಿಸುವ ಜಾಣ್ಮೆ ಅವನಿಗಿರಬೇಕು. ಸಿನಿಮಾ ಜನಸಾಮಾನ್ಯರಿಗೆ ಅರ್ಥವಾಗುವಂತೆ ಇರಬೇಕು ಎಂದು ಖ್ಯಾತ ಸಾಹಿತಿ, ಸಿನೆಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಅಭಿಪ್ರಾಯ ಪಟ್ಟರು. ಅವರು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಷನ್, ಮುಂಬಯಿ ಇವರು ಜೊತೆಗೂಡಿ ನಡೆಸಿದ್ದ ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬ ದತ್ತಿ ಉಪನ್ಯಾಸದ ಎರಡನೆ ದಿನ ಆದಿತ್ಯವಾರ ‘ನಾನು ಮತ್ತು ನನ್ನ ಸಿನಿಮಾ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 
ನಾಗತಿಹಳ್ಳಿ ಅವರು ನಿರ್ದೇಶಿಸಿದ ಕಾಡಿನ ಬೆಂಕಿಯಿಂದ ಹಿಡಿದು ಅಮೇರಿಕಾ ಅಮೇರಿಕಾ ಹಾಗೂ ಇತ್ತೀಚಿನ ಇಷ್ಟಕಾಮ್ಯದವರೆಗೆ ತಮ್ಮ ವಿವಿಧ ತರದ, ಸಿಹಿ ಕಹಿ ಅನುಭವಗಳನ್ನುಹ್, ಸೋಲು ಗೆಲುವಿನ ದಾರಿಯನ್ನು ಸವೆಸಿದ ರೀತಿಯನ್ನು  ತೆರೆದಿಟ್ಟರು. ಅಮೇರಿಕಾ ಅಮೇರಿಕಾ ದೊಡ್ಡ ವಿಸ್ಮಯವನ್ನು ಮಾಡಿದ ಚಿತ್ರ. ಹೊಸಬರನ್ನೇ ಆರಿಸಿಕೊಂಡ ಆ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದದ್ದು ಮಾತ್ರವಲ್ಲ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅನಂತರ ಅದೆಷ್ಟು ಪರಿಶ್ರಮಪಟ್ಟು ಸಿನೆಮಾ ಮಾಡಿದರೂ ಕೂಡಾ ಪ್ರೇಕ್ಷಕರ ದೃಷ್ಟಿಯಲ್ಲಿ ಅಮೇರಿಕಾ ಅಮೇರಿಕಾ ಚಿತ್ರ ಮಾಡಿದ ಯಶಸ್ಸು ಗಳಿಸಾಗಲೇ ಇಲ್ಲ ಎಂದವರು ನುಡಿದರು. 
ನಿರ್ದೇಶಕನ ಹೆಗಲ ಮೇಲೆ ನಿರ್ಮಾಪಕನ ಹಣದ ಜವಾಬ್ದಾರಿ ಇರುತ್ತದೆ. ಹೊತ್ತು ಗೊತ್ತಿಲ್ಲದೆ ಆತ ದುಡಿಯಬೇಕಾಗುತ್ತದೆ. ಆಯಾಯ ನಟ ನಟಿಯರ ಗುಣ ಸ್ವಭಾವಕ್ಕೆ ಹೊಂದಿಕೊಂಡು ಹೋಗುವ ತಾಳ್ಮೆ,  ಅವರಿಂದ ಉತ್ತಮವಾದ ಅಭಿನಯವನ್ನು ಹೊರಹಾಕಿಸುವ ಜಾಣ್ಮೆ ನಿರ್ದೇಶಕನಿರಬೇಕು ಎಂದು ಅವರು ಬೇರೆ ಬೇರೆ ಸಿನಿಮಾಗಳನ್ನು ವಿವಿಧ ಮಗ್ಗುಲುಗಳಲ್ಲಿಟ್ಟು ನೋಡುವ, ವಿಮರ್ಶಿಸುವ ಕುರಿತು ಅವರು ಚರ್ಚಿಸಿದರು. ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಿನೆಮಾ ಕ್ಷೇತ್ರದ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿರ್ದೇಶಕನ ಕಲ್ಪನೆಗೆ ಸರಿಯಾದ ಚಿತ್ರ ಮೂಡಿಬರಬೇಕಾದರೆ ಪಟ್ಟಪಾಡನ್ನು ಅಮೇರಿಕಾ ಚಿತ್ರದ ಕೊನೆಯ ದೃಶ್ಯದ ಉದಾಹರಣೆ ನೀಡಿದರು. 
ಮೈಸೂರು ಅಸೋಸಿಯೇಷನ್ನಿನ ಜಾಗತಿಕ ಮಟ್ಟದ ಕಥಾ ಸ್ಪರ್ಧೆಯ ತೀರ್ಪುಗಾರರು ಹಾಗೂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ, ವಿಜ್ಞಾನಿ ಡಾ.ವ್ಯಾಸರಾವ್ ನಿಂಜೂರು ಅವರು ಕಥೆಗಾರರು ಇನ್ನಷ್ಟು ಮಾಗಬೇಕು. ಮಾಸ್ತಿಯವರನ್ನು ಅನುಸರಿಸಿದರೆ ಸಾಲದು. ಅವರ ಮಟ್ಟಕ್ಕೆ ಏರುವ ಪ್ರಯತ್ನ ಮಾಡಬೇಕು. ಅದಕ್ಕೆ ಸತತ ಓದು ಅಗತ್ಯ ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು. 
ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ ಮುಂಬಯಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ 93 ವರ್ಷಗಳಿಂಡ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದು ಕಳೆದ ಮೂರು ವರ್ಷಗಳಿಂದ ಕಥೆ, ಕಾವ್ಯ ಸ್ಪರ್ಧೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಿರುವುದು ಅಭಿಮಾನದ ಸಂಗತಿ. ಈ ಉಪಕ್ರಮ ಹೊಸ ಲೇಖಕರನ್ನು ಹುಟ್ಟು ಹಾಕುವಲ್ಲಿ ಯಶಸ್ಸು ಕಂಡಿದೆ. ಬಹುಮುಖ ಪ್ರತಿಭೆಯ ನಾಗತಿಹಳ್ಳಿ ಚಂದ್ರಶೇಖರ ಅವರು ಸಿನೆಮಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದವರು. ಮೂಲತ: ಸಾಹಿತಿಯಾಗಿ ಸಿನೆಮಾ ಕ್ಷೇತ್ರಕ್ಕೆ ತಮ್ಮದೇ ಆದ ಮಹತ್ವದ ಯೋಗದಾನ ನೀಡಿದ್ದಾರೆ ಎಂದು ನಾಗತಿಹಳ್ಳಿ ಅವರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಅಸೋಸಿಯೇಷನ್ ಆಯೋಜಿಸಿದ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಯಿತು. ಮುಸ್ತಾಫ.ಕೆ.ಎಚ್, ಮಂಗಳೂರು(ಪ್ರಥಮ), ದಿವ್ಯಾ ಕಾರಂತ, ಬೆಂಗಳೂರು(ದ್ವಿತೀಯ), ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ(ತೃತೀಯ), ಪ್ರವೀಣ್ ಕುಮಾರ್.ಜಿ., ಬೆಂಗಳೂರು ಹಾಗೂ ಎಸ್.ಜಿ.ಶಿವಶಂಕರ್, ಮೈಸೂರು ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು. ಖ್ಯಾತ ಸಾಹಿತಿ ಸುನಂದಾ ಕಡಮೆ, ಹುಬ್ಬಳ್ಳಿ ಹಾಗೂ ಡಾ.ವ್ಯಾಸರಾವ್ ನಿಂಜೂರು, ಮುಂಬಯಿ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು.  ನಾರಾಯಣ ನವಿಲೇಕರ್ ಅವರು ಕಥಾ ಸ್ಪರ್ಧೆಯ ವಿಜೇತರನ್ನು ಪರಿಚಿಯಿಸಿ ಯಾದಿಯನ್ನು ಓದಿದರು. ವಿಜೇತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಬೇಂದ್ರೆ ಕಾವ್ಯಕೂಟ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ ವಿದ್ಯಾರ್ಥಿ ಅನಿತಾ.ಪೂಜಾರಿ ತಾಕೋಡೆ ಅವರನ್ನು ಗೌರವಿಸಲಾಯಿತು.
ಪದ್ಮನಾಭ ಅವರು ಸ್ವಾಗತ ಗೀತೆ ಹಾಡಿದರು. ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಷನ್ನಿನ ಅಧ್ಯಕ್ಷರಾದ ಶ್ರೀಮತಿ ಕೆ. ಕಮಲಾ ಅವರು ಧನ್ಯವಾದ ಸಮರ್ಪಿಸಿದರು.
 

 

Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019 Mysore Association Golden Jubilee Endowment Lecture Series - 2019